ಕೋವಿಡ್-೧೯ನ ಈ ಕಾಲದಲ್ಲಿ ಮದ್ಯ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅಮೆರಿಕಾದ ಸಿ ಡಿ ಸಿ ಯು ನೀರು ಮತ್ತು ಸಾಬೂನು ಸಿಗದ ಕಡೆ ಇವುಗಳನ್ನು ಉಪಯೋಗಿಸುವಂತೆ ಸೂಚಿಸಿದೆ. ಹೆಚ್ಚಿನ ಮದ್ಯ ಆಧಾರಿತ ಸ್ಯಾನಿಟೈಸರ್ಗಳು ಐಸೋಪ್ರೊಪೈಲ್ ಆಲ್ಕೋಹಾಲ್ ಅಥವಾ ಈಥೈಲ್ ಆಲ್ಕೋಹಾಲ್ ಹೊಂದಿರುತ್ತವೆ.
ಮದ್ಯವು ಬ್ಯಾಕ್ಟೀರಿಯಾಗಳ ಜೀವಕೋಶದ ಹೊರ ಪದರವನ್ನು, ಮತ್ತು ವೈರಸ್ಗಳ ಹೊದಿಕೆಯನ್ನು ನಾಶಪಡಿಸುತ್ತದೆ. ಹಾಗಾಗಿ ನಮ್ಮ ಚರ್ಮ ಅಥವಾ ಇನ್ಯಾವುದಾದರೋ ಮೇಲ್ಮೈಯ ಮೇಲೆ ಮದ್ಯವನ್ನು ಸಿಂಪಡಿಸಿದರೆ ಈ ಕೀಟಾಣುಗಳು ನಾಶವಾಗುತ್ತವೆ. ಅದಕ್ಕೆಂದೇ ಇದನ್ನು ಮೇಲ್ಮೈಗಳನ್ನು ಸ್ವಚ್ಛಗೊಳಿಸಲು, ನಮಗೆ ಗಾಯವಾದಾಗ ಅದು ನಂಜಾಗದಂತೆ ಶುಚಿಗೊಳಿಸಲು ಮತ್ತು ಇತರೆ ಸೋಂಕುಗಳನ್ನು ತಡೆಯಲು ಉಪಯೋಗಿಸಲಾಗುತ್ತದೆ.
ಆದರೆ ಮದ್ಯದ ಉಪಯೋಗಕ್ಕೆ ಕೆಲವು ಮಿತಿಗಳಿವೆ. ಇದು ಬೀಜಕಗಳನ್ನು ಅಥವಾ ಹೊದಿಕೆಯಿಲ್ಲದ ವೈರಸ್ಗಳನ್ನು ನಾಶ ಮಾಡುವುದಿಲ್ಲ. ಅಲ್ಲದೆ ಇದನ್ನು ಪದೇ ಪದೇ ಬಳಸುವುದರಿಂದ ತ್ವಚೆಯ ಶುಷ್ಕತೆ ಹೆಚ್ಚುತ್ತದೆ, ಮತ್ತು ಅದು ಕಣ್ಣಿನೊಳಗೆ ಪ್ರವೇಶಿಸಿದರೆ, ಕಣ್ಣುಗಳು ಉರಿಯುತ್ತವೆ.
ಹಲವು ಮದ್ಯ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಸೋಂಕು ತರುವ ಕೀಟಾಣುಗಳ ವಿರುದ್ಧ ಹೋರಾಡಲು ರಚಿಸಲ್ಪಟ್ಟಿದೆ. ಮದ್ಯದಂತಹ ಸೋಂಕುನಿವಾರಕಗಳು ಇಂತಹ ಕೀಟಾಣುಗಳನ್ನು ನಾಶಮಾಡಿ ಮೇಲ್ಮೈಗಳನ್ನು ಹಾಗೂ ಚರ್ಮವನ್ನು ಶುಚಿಗೊಳಿಸುತ್ತದೆ. ಇದರಿಂದ ಈ ಹಾನಿಕಾರಕ ಜೀವಿಗಳು ನಮ್ಮ ದೇಹದ ಒಳಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ. ಮದ್ಯವು ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಮತ್ತು ಒಮ್ಮೆ ಇಂತಹ ಕೀಟಾಣುಗಳು ದೇಹದೊಳಗೆ ಹೋದ ಮೇಲೆ ಮದ್ಯವು ಏನನ್ನೂ ಮಾಡಲಾಗುವುದಿಲ್ಲ.
