ಹೆಣ್ಣುಮಕ್ಕಳ ಮುಟ್ಟಿನ ಚಕ್ರ ಸರಣಿ – ಭಾಗ 1 – ಜೀವ ವಿಜ್ಞಾನ

ಹೆಣ್ಣುಮಕ್ಕಳ ದೇಹದ ಸಂತಾನೋತ್ಪತ್ತಿ ವ್ಯವಸ್ಥೆಯ (ಮಕ್ಕಳ ಹೆರುವ ಏರ್ಪಾಟು) ಭಾಗವಾಗಿರುವ ಅಂಗಗಳಲ್ಲಿ, ಪದೇಪದೇ ನಡೆಯುವ ಎಲ್ಲ ಜೈವಿಕ ಬದಲಾವಣೆಗಳು ಮುಟ್ಟಿನಚಕ್ರದಲ್ಲಿ ಸೇರುತ್ತವೆ. ಇದು ಅಂಡಾಶಯ (ತತ್ತಿಚೀಲ), ಗರ್ಭಾಶಯ (ಬಸಿರುಚೀಲ), ಬಸಿರು ಕಂಠ ಮತ್ತು ಯೋನಿಯಂತಹ ಸಂತಾನೋತ್ಪತ್ತಿ ಮಾಡುವ (ಹೆರುವ) ಅಂಗಗಳನ್ನು ಹೊಂದಿರುವವರಲ್ಲಿ ಸಹಜವಾಗಿ ಕಂಡುಬರುತ್ತದೆ. ಪ್ರತಿ ತಿಂಗಳು, ತತ್ತಿಚೀಲವು ಹೊಸಜೀವವೊಂದನ್ನು ಹುಟ್ಟಿಸಬಲ್ಲ ಅಂಡಾಣು ಅಥವಾ ತತ್ತಿಗಳೆಂಬ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ, ಅವು ಗಂಡು ಹೆಣ್ಣು ಕೂಡಿಕೆಯ ಸಮಯದಲ್ಲಿ ಹೆಣ್ಣಿನ ಜನನಾಂಗದ ನಾಳದ ಮೂಲಕ ಒಳಬರುವ ಗಂಡುಬಿತ್ತುಗಳೊಂದಿಗೆ (ವೀರ್ಯ) ಬೆಸೆಕರಗುತ್ತವೆ.     

ಒಂದು ವೇಳೆ ತತ್ತಿಯು ಗಂಡುಬಿತ್ತಿನೊಡನೆ (ವೀರ್ಯ) ಬೆಸೆಕರಗಿದರೆ, ಅದು ಬಸಿರು ಎಂಬ ಒಂದೇ ಕೋಶವಾಗಿ, ಬಸಿರುಚೀಲದ ಗೋಡೆಗೆ ಅಂಟಿಕೊಳ್ಳುತ್ತದೆ (ಬಸಿರುನಿಲ್ಲುವುದು) ಮತ್ತು ಬಸಿರು ಬಲಿಯುವ ಕಾಲದಲ್ಲಿ ಹಂತಹಂತವಾಗಿ ಒಂದು ಹೊಸ ಜೀವವಾಗಿ ಬೆಳೆಯುತ್ತದೆ, ಕೊನೆಗೆ ಮಗುವಾಗಿ ಹುಟ್ಟುತ್ತದೆ. ಆದ್ದರಿಂದಲೇ, ಪ್ರತೀ ತಿಂಗಳು, ತತ್ತಿ- ಗಂಡುಬಿತ್ತು ಬೆಸೆಕರಗುವುದನ್ನು ಎದುರುನೋಡುತ್ತಾ, ಮುಂದಿನ ಒಂಬತ್ತು ತಿಂಗಳಲ್ಲಿ ಬಸಿರನ್ನು ಒಂದು ಹೊಸ ಮಾನವ ಜೀವಿಯಾಗಿ ಬೆಳೆಸಲು ಅನುಕೂಲವಾದ ಜಾಗವನ್ನಾಗಿ ಬಸಿರುಚೀಲವು ತನ್ನನ್ನು ತಾನು ಅಣಿಗೊಳಿಸಿಕೊಳ್ಳುತ್ತದೆ. ಗೋಡೆಗೆ ಬಸಿರು ಅಂಟಿಕೊಂಡು ಆರಯ್ಕೆ ಪಡೆದು, ಬದುಕಿ ಬೆಳೆಯಲು ಅನುವಾಗುವಂತೆ ಬಸಿರುಚೀಲದ ಗೋಡೆಯಲ್ಲಿ ರಕ್ತನಾಳಗಳು ಬೆಳೆದು ತುಂಬಿ ಹರಡಿ ಗೋಡೆ ಮಂದವಾಗುತ್ತದೆ. ಯಾವಾಗ ತತ್ತಿ- ಗಂಡುಬಿತ್ತಿನ ಬೆಸೆಕರಗುವಿಕೆ ಆಗುವುದಿಲ್ಲವೋ, ಬಸಿರುಚೀಲದ ಗೋಡೆಯ ಮೇಲಿನ ಮಂದದ್ರವವನ್ನು ಮೈಯು ಮುಟ್ಟಿನ ರಕ್ತದ ರೂಪದಲ್ಲಿ ಹೊರಹಾಕುತ್ತದೆ.

ಹಾಗಾಗಿ ಮುಟ್ಟಿನ ರಕ್ತದಲ್ಲಿ ಸಾಮಾನ್ಯವಾಗಿ ಹೇರಳ ಪ್ರಮಾಣದ ರಕ್ತ, ಕೆಲವು ರಕ್ತದ ಗಂಟುಗಳು, ಬಸಿರುಚೀಲದ ಗೋಡೆಯಿಂದ ಕಿತ್ತುಬಂದ ಒಳಮೈ, ಮತ್ತು ಯೋನಿ ಮತ್ತು ಬಸಿರುಕಂಠದ ಕೋಶಗಳಿಂದ ಬಂದ ನೀರು, ಆಯಾನುಗಳು, ಲೋಳೆ ಮತ್ತು ಬ್ಯಾಕ್ಟೀರಿಯಾಗಳನ್ನೊಳಗೊಂಡ ರಸವನ್ನು ಒಳಗೊಂಡಿರುತ್ತದೆ. ಜೊತೆಗೆ ಈ ಕಬ್ಬಿಣ, ತಾಮ್ರದಂತಹ ಲೋಹಗಳ ಆಯಾನುಗಳು ಮತ್ತು ಆರೋಗ್ಯವಂತ ಯೋನಿಯಲ್ಲಿರುವ ಬ್ಯಾಕ್ಟೀರಿಯಾಗಳು ಇರುವುದರಿಂದ ಮುಟ್ಟಿನ ರಕ್ತಕ್ಕೆ ಒಂದು ರೀತಿಯ ವಾಸನೆ ಇರುತ್ತದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: