ಹೆಣ್ಣುಮಕ್ಕಳ ಮುಟ್ಟಿನ ಚಕ್ರ ಸರಣಿ – ಭಾಗ 1 – ಜೀವ ವಿಜ್ಞಾನ

ಹೆಣ್ಣುಮಕ್ಕಳ ದೇಹದ ಸಂತಾನೋತ್ಪತ್ತಿ ವ್ಯವಸ್ಥೆಯ (ಮಕ್ಕಳ ಹೆರುವ ಏರ್ಪಾಟು) ಭಾಗವಾಗಿರುವ ಅಂಗಗಳಲ್ಲಿ, ಪದೇಪದೇ ನಡೆಯುವ ಎಲ್ಲ ಜೈವಿಕ ಬದಲಾವಣೆಗಳು ಮುಟ್ಟಿನಚಕ್ರದಲ್ಲಿ ಸೇರುತ್ತವೆ. ಇದು ಅಂಡಾಶಯ (ತತ್ತಿಚೀಲ), ಗರ್ಭಾಶಯ (ಬಸಿರುಚೀಲ), ಬಸಿರು ಕಂಠ ಮತ್ತು ಯೋನಿಯಂತಹ ಸಂತಾನೋತ್ಪತ್ತಿ ಮಾಡುವ (ಹೆರುವ) ಅಂಗಗಳನ್ನು ಹೊಂದಿರುವವರಲ್ಲಿ ಸಹಜವಾಗಿ ಕಂಡುಬರುತ್ತದೆ. ಪ್ರತಿ ತಿಂಗಳು, ತತ್ತಿಚೀಲವು ಹೊಸಜೀವವೊಂದನ್ನು ಹುಟ್ಟಿಸಬಲ್ಲ ಅಂಡಾಣು ಅಥವಾ ತತ್ತಿಗಳೆಂಬ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ, ಅವು ಗಂಡು ಹೆಣ್ಣು ಕೂಡಿಕೆಯ ಸಮಯದಲ್ಲಿ ಹೆಣ್ಣಿನ ಜನನಾಂಗದ ನಾಳದ ಮೂಲಕ ಒಳಬರುವ ಗಂಡುಬಿತ್ತುಗಳೊಂದಿಗೆ (ವೀರ್ಯ) ಬೆಸೆಕರಗುತ್ತವೆ.     

ಒಂದು ವೇಳೆ ತತ್ತಿಯು ಗಂಡುಬಿತ್ತಿನೊಡನೆ (ವೀರ್ಯ) ಬೆಸೆಕರಗಿದರೆ, ಅದು ಬಸಿರು ಎಂಬ ಒಂದೇ ಕೋಶವಾಗಿ, ಬಸಿರುಚೀಲದ ಗೋಡೆಗೆ ಅಂಟಿಕೊಳ್ಳುತ್ತದೆ (ಬಸಿರುನಿಲ್ಲುವುದು) ಮತ್ತು ಬಸಿರು ಬಲಿಯುವ ಕಾಲದಲ್ಲಿ ಹಂತಹಂತವಾಗಿ ಒಂದು ಹೊಸ ಜೀವವಾಗಿ ಬೆಳೆಯುತ್ತದೆ, ಕೊನೆಗೆ ಮಗುವಾಗಿ ಹುಟ್ಟುತ್ತದೆ. ಆದ್ದರಿಂದಲೇ, ಪ್ರತೀ ತಿಂಗಳು, ತತ್ತಿ- ಗಂಡುಬಿತ್ತು ಬೆಸೆಕರಗುವುದನ್ನು ಎದುರುನೋಡುತ್ತಾ, ಮುಂದಿನ ಒಂಬತ್ತು ತಿಂಗಳಲ್ಲಿ ಬಸಿರನ್ನು ಒಂದು ಹೊಸ ಮಾನವ ಜೀವಿಯಾಗಿ ಬೆಳೆಸಲು ಅನುಕೂಲವಾದ ಜಾಗವನ್ನಾಗಿ ಬಸಿರುಚೀಲವು ತನ್ನನ್ನು ತಾನು ಅಣಿಗೊಳಿಸಿಕೊಳ್ಳುತ್ತದೆ. ಗೋಡೆಗೆ ಬಸಿರು ಅಂಟಿಕೊಂಡು ಆರಯ್ಕೆ ಪಡೆದು, ಬದುಕಿ ಬೆಳೆಯಲು ಅನುವಾಗುವಂತೆ ಬಸಿರುಚೀಲದ ಗೋಡೆಯಲ್ಲಿ ರಕ್ತನಾಳಗಳು ಬೆಳೆದು ತುಂಬಿ ಹರಡಿ ಗೋಡೆ ಮಂದವಾಗುತ್ತದೆ. ಯಾವಾಗ ತತ್ತಿ- ಗಂಡುಬಿತ್ತಿನ ಬೆಸೆಕರಗುವಿಕೆ ಆಗುವುದಿಲ್ಲವೋ, ಬಸಿರುಚೀಲದ ಗೋಡೆಯ ಮೇಲಿನ ಮಂದದ್ರವವನ್ನು ಮೈಯು ಮುಟ್ಟಿನ ರಕ್ತದ ರೂಪದಲ್ಲಿ ಹೊರಹಾಕುತ್ತದೆ.

ಹಾಗಾಗಿ ಮುಟ್ಟಿನ ರಕ್ತದಲ್ಲಿ ಸಾಮಾನ್ಯವಾಗಿ ಹೇರಳ ಪ್ರಮಾಣದ ರಕ್ತ, ಕೆಲವು ರಕ್ತದ ಗಂಟುಗಳು, ಬಸಿರುಚೀಲದ ಗೋಡೆಯಿಂದ ಕಿತ್ತುಬಂದ ಒಳಮೈ, ಮತ್ತು ಯೋನಿ ಮತ್ತು ಬಸಿರುಕಂಠದ ಕೋಶಗಳಿಂದ ಬಂದ ನೀರು, ಆಯಾನುಗಳು, ಲೋಳೆ ಮತ್ತು ಬ್ಯಾಕ್ಟೀರಿಯಾಗಳನ್ನೊಳಗೊಂಡ ರಸವನ್ನು ಒಳಗೊಂಡಿರುತ್ತದೆ. ಜೊತೆಗೆ ಈ ಕಬ್ಬಿಣ, ತಾಮ್ರದಂತಹ ಲೋಹಗಳ ಆಯಾನುಗಳು ಮತ್ತು ಆರೋಗ್ಯವಂತ ಯೋನಿಯಲ್ಲಿರುವ ಬ್ಯಾಕ್ಟೀರಿಯಾಗಳು ಇರುವುದರಿಂದ ಮುಟ್ಟಿನ ರಕ್ತಕ್ಕೆ ಒಂದು ರೀತಿಯ ವಾಸನೆ ಇರುತ್ತದೆ.

ಮದ್ಯ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ

ಕೋವಿಡ್-೧೯ನ ಈ ಕಾಲದಲ್ಲಿ ಮದ್ಯ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅಮೆರಿಕಾದ ಸಿ ಡಿ ಸಿ ಯು ನೀರು ಮತ್ತು ಸಾಬೂನು ಸಿಗದ ಕಡೆ ಇವುಗಳನ್ನು ಉಪಯೋಗಿಸುವಂತೆ ಸೂಚಿಸಿದೆ. ಹೆಚ್ಚಿನ ಮದ್ಯ ಆಧಾರಿತ ಸ್ಯಾನಿಟೈಸರ್ಗಳು ಐಸೋಪ್ರೊಪೈಲ್ ಆಲ್ಕೋಹಾಲ್ ಅಥವಾ ಈಥೈಲ್ ಆಲ್ಕೋಹಾಲ್ ಹೊಂದಿರುತ್ತವೆ. 

ಮದ್ಯವು ಬ್ಯಾಕ್ಟೀರಿಯಾಗಳ ಜೀವಕೋಶದ ಹೊರ ಪದರವನ್ನು, ಮತ್ತು ವೈರಸ್ಗಳ ಹೊದಿಕೆಯನ್ನು ನಾಶಪಡಿಸುತ್ತದೆ. ಹಾಗಾಗಿ ನಮ್ಮ ಚರ್ಮ ಅಥವಾ ಇನ್ಯಾವುದಾದರೋ ಮೇಲ್ಮೈಯ ಮೇಲೆ ಮದ್ಯವನ್ನು ಸಿಂಪಡಿಸಿದರೆ ಈ ಕೀಟಾಣುಗಳು ನಾಶವಾಗುತ್ತವೆ. ಅದಕ್ಕೆಂದೇ ಇದನ್ನು ಮೇಲ್ಮೈಗಳನ್ನು ಸ್ವಚ್ಛಗೊಳಿಸಲು, ನಮಗೆ ಗಾಯವಾದಾಗ ಅದು ನಂಜಾಗದಂತೆ ಶುಚಿಗೊಳಿಸಲು ಮತ್ತು ಇತರೆ ಸೋಂಕುಗಳನ್ನು ತಡೆಯಲು ಉಪಯೋಗಿಸಲಾಗುತ್ತದೆ.     

ಆದರೆ ಮದ್ಯದ ಉಪಯೋಗಕ್ಕೆ ಕೆಲವು ಮಿತಿಗಳಿವೆ.  ಇದು ಬೀಜಕಗಳನ್ನು ಅಥವಾ ಹೊದಿಕೆಯಿಲ್ಲದ ವೈರಸ್ಗಳನ್ನು ನಾಶ ಮಾಡುವುದಿಲ್ಲ. ಅಲ್ಲದೆ ಇದನ್ನು ಪದೇ ಪದೇ ಬಳಸುವುದರಿಂದ ತ್ವಚೆಯ ಶುಷ್ಕತೆ ಹೆಚ್ಚುತ್ತದೆ, ಮತ್ತು ಅದು  ಕಣ್ಣಿನೊಳಗೆ ಪ್ರವೇಶಿಸಿದರೆ, ಕಣ್ಣುಗಳು ಉರಿಯುತ್ತವೆ.    

ಹಲವು ಮದ್ಯ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಸೋಂಕು ತರುವ ಕೀಟಾಣುಗಳ ವಿರುದ್ಧ ಹೋರಾಡಲು ರಚಿಸಲ್ಪಟ್ಟಿದೆ. ಮದ್ಯದಂತಹ ಸೋಂಕುನಿವಾರಕಗಳು ಇಂತಹ ಕೀಟಾಣುಗಳನ್ನು ನಾಶಮಾಡಿ ಮೇಲ್ಮೈಗಳನ್ನು ಹಾಗೂ ಚರ್ಮವನ್ನು ಶುಚಿಗೊಳಿಸುತ್ತದೆ. ಇದರಿಂದ ಈ ಹಾನಿಕಾರಕ ಜೀವಿಗಳು ನಮ್ಮ ದೇಹದ ಒಳಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ. ಮದ್ಯವು ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಮತ್ತು ಒಮ್ಮೆ ಇಂತಹ ಕೀಟಾಣುಗಳು ದೇಹದೊಳಗೆ ಹೋದ ಮೇಲೆ ಮದ್ಯವು ಏನನ್ನೂ ಮಾಡಲಾಗುವುದಿಲ್ಲ.  

ರೋಗನಿರೋಧಕ ಶಕ್ತಿಯೆಂದರೇನು?

ರೋಗನಿರೋಧಕ ಶಕ್ತಿಯು, ಹೆಸರೇ ಸೂಚಿಸುವಂತೆ, ಹೊರಗಿನ ರೋಗಾಣುಗಳಿಂದ ನಮ್ಮನ್ನು ಕಾಪಾಡುವ ವ್ಯವಸ್ಥೆ. ನಮ್ಮ ದೇಹದಲ್ಲಿರುವ ಕೋಶಗಳು ಮತ್ತು ಅಣುಗಳು ನಮಗೆ ಈ ಸುರಕ್ಷಾ ಕವಚವನ್ನು ನೀಡುತ್ತವೆ. ಇವು ಹೊರಗಿನಿಂದ ದೇಹದೊಳಗೆ ಬಂದಿರುವ ಯಾವುದೇ ಜೀವಾಣು ಅಥವಾ ಕಣಗಳ ವಿರುದ್ಧ ಹೋರಾಡುತ್ತವೆ. ರೋಗನಿರೋಧಕ ಕೋಶಗಳಲ್ಲಿರುವ ಕಣಗಳು ಪರೋಪಜೀವಿಗಳ ಮೇಲಿರುವ ಕಣಗಳಿಗೆ ಅಂಟಿಕೊಂಡು ಅವುಗಳು ನಮಗೆ ಸೋಂಕು ಉಂಟುಮಾಡುವ ಸಾಧ್ಯತೆಯನ್ನು ತಪ್ಪಿಸುತ್ತವೆ. ಹೀಗೆ ಬೆಳೆಯುವ ರೋಗನಿರೋಧಕ ಶಕ್ತಿಯು ಇಂತಹ ಪರೋಪಜೀವಿಗಳಿಂದ ನಮನ್ನು ಬಹುಸಮಯದವರೆಗೆ ರಕ್ಷಿಸುತ್ತವೆ. ಪ್ರಾಣಿಗಳಲ್ಲಿ ಹಾಗೂ ಸಸ್ಯಗಳಲ್ಲಿ ಹಲವು ರೋಗಗಳ ವಿರುದ್ಧ ಈ ನಿರೋಧಕ ಶಕ್ತಿ ಇದೆ.  

ವೈರಾಣುಗಳ ವಿರುದ್ಧ ನಮಗೆ ರೋಗನಿರೋಧಕ ಶಕ್ತಿ ಇದೆಯೇ?

ಒಂದು ವೈರಾಣು ನಮ್ಮನ್ನು ಸೋಂಕಿಸಿದಾಗ, ನಮ್ಮ ಜೀವಕೋಶಗಳು ಹಾಗು ಕೆಲವು ಸಸಾರಜನಕ (ಪ್ರೋಟೀನ್)ಗಳು ಅವುಗಳ ವಿರುದ್ಧ ಹೋರಾಡಿ ಸೋಂಕು ಹರಡದಂತೆ ತಡೆಯುತ್ತವೆ. ನಮ್ಮ ರೋಗನಿರೋಧಕ ವ್ಯವಸ್ಥೆಯಲ್ಲಿರುವ ಆಯ್ದ ಪ್ರೋಟೀನ್ ಗಳು ವೈರಾಣುವಿನ ಮೈಮೇಲಿರುವ ಪ್ರೋಟೀನ್ ಗಳಿಗೆ ಅಂಟುತ್ತವೆ. ಆದರೂ ಈ ವೈರಾಣುಗಳು ರೋಗನಿರೋಧಕ ಜೀವಾಣುಗಳಿಂದ ಪಾರಾಗಲು ಬೇರೆ ಮಾರ್ಗಗಳನ್ನು ಹುಡುಕುತ್ತಿರುತ್ತವೆ. 

ಲಸಿಕೆಗಳು ಏಕೆ ಬೇಕು?

ಕೆಲವು ಸಂದರ್ಭಗಳಲ್ಲಿ, ನಿರ್ದಿಷ್ಟ ಪರೋಪಜೀವಿಗಳ ವಿರುದ್ಧ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ವರ್ಧಿಸಲು ಲಸಿಕೆಗಳನ್ನು ಕೊಡಲಾಗುತ್ತದೆ. ಸೋಂಕನ್ನುoಟುಮಾಡುವ ವೈರಾಣುವನ್ನು, ನಮಗೆ ರೋಗವನ್ನು ಹರಡದಂತೆ ಶಕ್ತಿಗುಂದಿಸಿ, ಲಸಿಕೆಯ ರೂಪದಲ್ಲಿ ನೀಡಲಾಗುತ್ತದೆ. ಕೆಲುವೊಮ್ಮೆ ನಶಿಸಿದ ವೈರಾಣುವಿನ ಕೆಲ ಭಾಗಗಳನ್ನು ಲಸಿಕೆಗೆ ಬಳಸುವುದುಂಟು. ಲಸಿಕೆಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸಿ ನಮ್ಮನ್ನು ಸೋಂಕನ್ನುಟುಮಾಡುವ ಕೆಲವು ವೈರಾಣುಗಳಿಂದ ಕಾಪಾಡುತ್ತವೆ. ಇವು ನಿರ್ದಿಷ್ಟ ವೈರಾಣುಗಳ ಮೇಲಷ್ಟೇ ಪ್ರಭಾವಕಾರಿ, ಎಲ್ಲಾ ವೈರಾಣುಗಳಿಂದಾಗುವ ಸೋಂಕುಗಳಿಂದ ನಮ್ಮನ್ನು ರಕ್ಷಿಸುವುದಿಲ್ಲ. ದಡಾರ ಮತ್ತು ಸಿಡುಬು ರೋಗಗಳಿಗೆ ಕೊಡುವ ಲಸಿಕೆಗಳು ಇದಕ್ಕೆ ಉದಾಹರಣೆಗಳು. 

ನಮ್ಮ ದೇಹಕ್ಕೆ ಈ ಹೊಸ ಕೊರೊನವೈರಸ್ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಇಲ್ಲ ಮತ್ತು ಇದರ ಸೋಂಕಿನಿಂದ ರಕ್ಷಿಸಲು ಈವರೆಗೆ ಯಾವ ಲಸಿಕೆಗಳೂ ಇಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮಗಳಾದ ಸಾಮಾಜಿಕ ಅಂತರ ಪಾಲಿಸುವುದು ಮತ್ತು ಹಸ್ತ ನೈರ್ಮಲ್ಯ ಕಾಪಾಡಿಕೊಳ್ಳುವುದು ಈ ಸೋಂಕಿನಿಂದ ಪಾರಾಗಲು ಇರುವ  ಉಪಾಯಗಳು.

ಸೊಳ್ಳೆಗಳು ಕೊರೊನ ವೈರಸ್ ಹರಡುವುದಿಲ್ಲ

ಕೊರೊನ ವೈರಸ್ ಅಥವಾ ಎನ್-ಸಿಒವಿಐಡಿ ೧೯ ಮನುಷ್ಯ ದೇಹದ ಉಸಿರಾಟದ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಸೋಂಕಾಗಿದೆ. ಸೊಳ್ಳೆಗಳು ಡೆಂಗೆ ಮತ್ತು ಚಿಕನ್‍ಗುನ್ಯದಂತಹ ಹಲವು ರೋಗಗಳನ್ನು ಹರಡುತ್ತವೆಯಾದರೂ ಅವು ಕೊರೊನ ವೈರಸ್ ಅನ್ನು ಹರಡುವುದಿಲ್ಲ. ಕೊರೊನ ಸೋಂಕು ತಗುಲಿದ ವ್ಯಕ್ತಿಯನ್ನು ಕಡಿಯುವ ಸೊಳ್ಳೆಗಳಿಗೆ ಅದನ್ನು ಹೊಂದಿ ಬೇರೆ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡುವ ಸಾಮರ್ಥ್ಯವಿಲ್ಲ. ಕೊರೊನ ವೈರಸ್ ಸೋಂಕು ತಗುಲಿದವರ ಸಿಂಬಳ, ಎಂಜಲು, ಅಥವಾ ಕೆಮ್ಮು ಮತ್ತು ಸೀನಿನಿಂದ ಹನಿಗಳ ರೂಪದಲ್ಲಿ ಹರಡುತ್ತದೆ. ಸೊಳ್ಳೆಗಳಿಂದ ಈ ವೈರಸ್ ಹರಡುತ್ತದೆ ಎನ್ನುವುದಕ್ಕೆ ಇವತ್ತಿನವರೆಗೆ ಯಾವುದೇ ಪುರಾವೆಗಳಿಲ್ಲ. ನಿಮ್ಮನ್ನು ಸೋಂಕಿನಿಂದ ರಕ್ಷಿಸಿಕೊಳ್ಳಲು ಸೋಂಕು ತಗುಲಿದ ಯಾವುದೇ ವ್ಯಕ್ತಿಯಿಂದ ದೂರವಿರುವಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಈ ರೋಗದಿಂದ ಬಳಲುತ್ತಿರುವವರು ಅಥವಾ ಇದರ ಲಕ್ಷಣಗಳನ್ನು ಹೊಂದಿರುವವರೊಡನೆ ಹತ್ತಿರದ ಒಡನಾಟವಾಗದಂತೆ ನೋಡಿಕೊಳ್ಳುವುದನ್ನು ಸಾಮಾಜಿಕ ಅಂತರ ಎನ್ನಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೆಲವು ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣಗಳೆಂದರೆ ಒಣ ಕೆಮ್ಮು, ಜ್ವರ ಮತ್ತು ದಣಿಯುವಿಕೆ.

ವೈರಸ್: ಏನಿದು?

ವೈರಸ್ (ವೈರಾಣು) ಒಂದು ಸಣ್ಣ ನಿರ್ಜೀವ ಜೀವಿ. ಇದು ಬ್ಯಾಕ್ಟೀರಿಯ, ಸಸ್ಯಗಳು ಹಾಗೂ ಪ್ರಾಣಿಗಳಿಗೆ ಸೋಂಕಾಗಿ ತಗುಲಬಹುದು. ಈ ಮೂಲಕ ಹಲವು ರೋಗಗಳನ್ನು ಉಂಟುಮಾಡಬಹುದು ಮತ್ತು ಕೆಲವೊಮ್ಮೆ ಈ ಜೀವಿಗಳ ಸಾವಿಗೂ ಕಾರಣವಾಗಬಹುದು. ವೈರಸ್‍ಗಳೊಳಗೆ ಮನುಷ್ಯ ಶರೀರದಲ್ಲಿರುವಂತೆ ಜೀವಕೋಶಗಳಿರುವುದಿಲ್ಲ. ಹೀಗಾಗಿ ಅವುಗಳ ಬೆಳವಣಿಗೆಗೆ ಅವು ಪೋಷಕ ಜೀವಕೋಶವೊಂದನ್ನು ಹುಡುಕಿಕೊಳ್ಳಬೇಕು. ಬಹುತೇಕ ವೈರಸ್‍ಗಳು ಈ ಮೂರು ಭಾಗಗಳನ್ನು ಹೊಂದಿರುತ್ತವೆ – ವೈರಸ್‍ನ ಕುರಿತು ಮಾಹಿತಿ ಹೊಂದಿರುವ ಒಂದು ರಾಸಾಯನಿಕ ರಚನೆ, ರಕ್ಷಾ ಸುತ್ತುವರಿ ಮತ್ತು ಹೊರಪದರ. ಜೀವಿಗಳಿಗಿಂತ ಇದು ಭಿನ್ನವಾಗಿದ್ದು, ವೈರಸ್ ಮತ್ತು ಜೀವಿಗಳ ನಡುವಿನ ಒಂದೇ ಸಾಮಾನ್ಯ ಅಂಶ ಎಂದರೆ ಜೀನ್‍ಗಳ ಕುರಿತ ಜೆನೆಟಿಕ್ ಮಾಹಿತಿಯನ್ನು ಹೊಂದಿರುವ ರಾಸಾಯನಿಕ ರಚನೆಗಳನ್ನು ಹೊಂದಿರುವುದು (ಜೀವಿಗಳಲ್ಲಿ ಡಿಎ‍ನ್‍ಎ ಮತ್ತು ಆರ್‍ಎನ್‍ಎ, ವೈರಸ್‍ನಲ್ಲಿ ಆರ್‍ಎನ್‍ಎ). ಪ್ರತಿಕೃತಿಗಳಾಗುವುದಕ್ಕಾಗಿ ವೈರಸ್ ಮೊದಲು ಒಂದು ಜೀವಿಯ ಜೀವಕೋಶವನ್ನು ಪ್ರವೇಶಿಸುತ್ತದೆ ಮತ್ತು ಜೀವಕೋಶದ ಯಾಂತ್ರಿಕ ವ್ಯವಸ್ಥೆಯನ್ನು ವಶಕ್ಕೊಳಪಡಿಸಿಕೊಳ್ಳುತ್ತದೆ. ತದನಂತರ ವೈರಸ್ ಜೀವಕೋಶದೊಳಗೆ ಹಲವು ಪ್ರತಿಕೃತಿಗಳನ್ನು ರಚಿಸುತ್ತದೆ. ಪ್ರತಿಕೃತಿಯಾದನಂತರೆ, ಜೀವಕೋಶವು ಸಿಡಿಯುತ್ತದೆ ಮತ್ತು ವೈರಸ್ ಕಣಗಳು ಇನ್ನೊಂದು ಜೀವಕೋಶವನ್ನು ಪ್ರವೇಶಿಸುತ್ತವೆ. ಕೆಲವೊಮ್ಮೆ ಹಲವು ಪ್ರತಿಕೃತಿಗಳನ್ನು ರಚಿಸುವ ಸಮಯದಲ್ಲಿ ರಾಸಾಯನಿಕ ರಚನೆಯಲ್ಲಿರುವ ಮಾಹಿತಿ ಬದಲಾಗಬಹುದು, ಇದನ್ನು ಮ್ಯುಟೇಶನ್ ಅಥವಾ ವ್ಯತ್ಯಯನ ಎಂದು ಕರೆಯಲಾಗುತ್ತದೆ. ಹೀಗಾದಲ್ಲಿ ಚಿಕಿತ್ಸೆಯೊಂದನ್ನು ಕಂಡುಹಿಡಿಯುವುದು ಕಠಿಣವಾಗಬಹುದು. ಸಾರ್ಸ್, ಶೀತಜ್ವರದ ವೈರಸ್ ಮತ್ತು ಎನ್‍-ಸಿಒವಿಐಡಿ ೧೯ (ಕೊರೊನ) ಮನುಷ್ಯರ ಮೇಲೆ ಸೋಂಕಾಗುವ ಕೆಲವು ವೈರಸ್‍ಗಳಾಗಿವೆ. ಇತ್ತೀಚಿನ ಎನ್‍-ಸಿಒವಿಐಡಿ ೧೯ ವೈರಸ್ ಹಿಂದೆ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಹೊಂದಿತ್ತು. ಮನುಷ್ಯರಿಗೆ ಸೋಂಕು ತಗಲಿದ್ದು ಮೊದಲ ಬಾರಿಗೆ ಚೈನಾದ ವುಹಾನ್‍ನಲ್ಲಿ ವರದಿಯಾಯಿತು. ಯಾವ ಪ್ರಾಣಿಯಿಂದ ಮನುಷ್ಯರಿಗೆ ವೈರಸ್ ಹೇಗೆ ವರ್ಗಾವಣೆ ಆಯಿತೆನ್ನುವುದು ಇನ್ನೂ ತಿಳಿದಿಲ್ಲ.